ದೈವ-ದೇವರು: ಭಯ ಅಲ್ಲ, ನಮ್ಮ ಬೇರು...
ಇವತ್ತಿನ ಜನರಲ್ಲಿ ದೈವ-ದೇವರ ಬಗ್ಗೆ ಸಾಕಷ್ಟು ಗೊಂದಲ, ಭಯ ಮತ್ತು ತಪ್ಪು ಕಲ್ಪನೆಗಳಿವೆ. "ದೈವ ಕಾಟ ಕೊಡುತ್ತಾ? ನಂಬಿಲ್ಲ ಅಂದ್ರೆ ಶಾಪ ಬರುತ್ತಾ? ಎಷ್ಟು ದೈವ-ದೇವರನ್ನು ಪೂಜೆ ಮಾಡಬೇಕು?" ಎಂಬ ಪ್ರಶ್ನೆಗಳು ಎಲ್ಲರ ಮನದಲ್ಲೂ ಇವೆ.
*ಮೊದಲನೆಯದಾಗಿ, ದೇವರು ಯಾರು? ದೈವ ಯಾರು? ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು.* ದೇವರು ಎಂದರೆ ಈ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿ, ಪಾಲಿಸಿ, ಕಾಯುತ್ತಿರುವ ಪರಮ ಶಕ್ತಿ. ಶಿವ, ವಿಷ್ಣು, ದೇವಿ, ಗಣಪತಿ ಇವರು ದೇವರು. ಇವರು Universe ನ CEO ಇದ್ದಂತೆ. ದೈವ ಎಂದರೆ ಆ ದೇವರಿಂದಲೇ ನೇಮಕಗೊಂಡು ನಮ್ಮ ಊರು, ನಮ್ಮ ಗುತ್ತು, ನಮ್ಮ ಮನೆ, ನಮ್ಮ ಜಮೀನನ್ನು ಕಾಯಲು ಬಂದ ಕ್ಷೇತ್ರಪಾಲಕರು. ಜುಮಾದಿ, ಅರಸು, ಗುಳಿಗ, ಬಬ್ಬುಸ್ವಾಮಿ, ರಕ್ತೇಶ್ವರಿ ಇವರೆಲ್ಲಾ ದೈವಗಳು. ಸರಳವಾಗಿ ಹೇಳಬೇಕೆಂದರೆ, ದೈವ ನಮ್ಮ ಊರಿನ ಪೊಲೀಸ್, ಜಡ್ಜ್ ಇದ್ದಂತೆ. ದೇವರು ಸುಪ್ರೀಂ ಕೋರ್ಟ್. ನಮಗೆ ಒಂದು Local ಸಮಸ್ಯೆ ಬಂದಾಗ ಮೊದಲು ಪೊಲೀಸ್ ಸ್ಟೇಷನ್‌ಗೆ ಹೋಗುತ್ತೇವೆಯೇ ಹೊರತು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅಲ್ಲ. ಅದೇ ರೀತಿ, ನಮ್ಮ ಕಷ್ಟ-ಸುಖಕ್ಕೆ ಮೊದಲು ನಮ್ಮ ಕುಲ ದೈವವನ್ನು, ನಂತರ ದೇವರನ್ನು ಮೊರೆ ಹೋಗಬೇಕು. ದೈವಗಳು ದೇವರ ಸೈನ್ಯ. ದೈವಕ್ಕೆ ಕೊಟ್ಟ ನಮಸ್ಕಾರ ದೇವರಿಗೇ ತಲುಪುತ್ತದೆ.
*ಎರಡನೆಯದಾಗಿ, "ನಂಬಿಲ್ಲ ಅಂದ್ರೆ ದೈವ-ದೇವರು ಶಾಪ ಕೊಡ್ತಾರಾ?" ಎಂಬುದು ದೊಡ್ಡ ಸುಳ್ಳು.* ದೈವ-ದೇವರು ನಮ್ಮ ತಂದೆ-ತಾಯಿ ಇದ್ದಂತೆ. ಒಬ್ಬ ಮಗ "ನೀನು ನನ್ನ ಅಪ್ಪ ಅಲ್ಲ" ಅಂದ ಮಾತ್ರಕ್ಕೆ ತಂದೆ ಮಗನನ್ನು ಶಪಿಸುತ್ತಾನಾ? ಇಲ್ಲ. ಬದಲಾಗಿ ದುಃಖಪಟ್ಟು, "ಯಾವಾಗ ನನ್ನ ಮಗನಿಗೆ ಬುದ್ಧಿ ಬರುತ್ತದೋ" ಅಂತ ಕಾಯುತ್ತಾನೆ. ಶಾಪ ಬರುವುದು ನಂಬದೇ ಇರುವುದಕ್ಕೆ ಅಲ್ಲ. ದೈವದ ಹೆಸರಿನಲ್ಲಿ ಸುಳ್ಳು ಹೇಳಿದರೆ, ಕೊಟ್ಟ ಹರಕೆ-ಮಾತನ್ನು ಮರೆತರೆ, ದೈವದ ಸೊತ್ತಿಗೆ ಮತ್ತು ಜಾಗಕ್ಕೆ ಮೋಸ ಮಾಡಿದರೆ, ಅಪ್ಪ-ಅಮ್ಮನಿಗೆ ಮತ್ತು ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದರೆ ಮಾತ್ರ ಶಾಪ ತಟ್ಟುತ್ತದೆ. ನಂಬಿಕೆ ಎಂಬುದು ಬಲವಂತದಿಂದ ಬರುವಂಥದ್ದಲ್ಲ. ಅದು ಅನುಭವದಿಂದ, ಸಂಕಷ್ಟದ ಸಮಯದಲ್ಲಿ ದೈವ ಕೊಡುವ ಸಹಾಯದಿಂದ ತಾನಾಗಿಯೇ ಹುಟ್ಟಬೇಕು.
*ಮೂರನೆಯದಾಗಿ, ಮೂಢನಂಬಿಕೆ ಮತ್ತು ನಿಜವಾದ ಸಂಪ್ರದಾಯದ ನಡುವಿನ ವ್ಯತ್ಯಾಸ ತಿಳಿಯಬೇಕು.* "ಕೋಳಿ, ಸಾರಾಯಿ ಕೊಟ್ಟರೆ ಮಾತ್ರ ದೈವ ಖುಷಿಪಡುತ್ತದೆ" ಎಂಬುದು ತಪ್ಪು ಕಲ್ಪನೆ. ಅದು ಬಲಿ ಅಲ್ಲ, ಕಾಣಿಕೆ. ಹಿಂದೆ ರಾಜ-ಮಹಾರಾಜರು ತಮಗೆ ಇಷ್ಟವಾದ ಆಹಾರವನ್ನು ದೈವಕ್ಕೆ ಅರ್ಪಿಸುತ್ತಿದ್ದರು. ದೈವಕ್ಕೆ ಮನಸ್ಸು ಮುಖ್ಯ, ವಸ್ತು ಅಲ್ಲ. ಕಾಗೆಗೆ ಒಂದು ಬಿಸ್ಕೆಟ್ ಹಾಕಿದರೂ ಗುಳಿಗ ದೈವ ಸ್ವೀಕರಿಸುತ್ತಾನೆ.
"ದೈವ ಬಂದರೆ ಕುಣಿಯಲೇಬೇಕು" ಎಂಬುದು ಕೂಡ ಸುಳ್ಳು. ದೈವ ಆವೇಶ ಬರುವುದು ಲಕ್ಷದಲ್ಲಿ ಒಬ್ಬರಿಗೆ ಮಾತ್ರ, ಅದು ದೈವದ ಆಯ್ಕೆ. ಸಾಮಾನ್ಯ ಭಕ್ತರು ಕೈ ಮುಗಿದು ಪ್ರಾರ್ಥಿಸಿದರೆ ಸಾಕು. ದೈವಕ್ಕೆ ಹೆದರಬೇಕಾಗಿಲ್ಲ, ಪ್ರೀತಿ ಮತ್ತು ಗೌರವ ಕೊಡಬೇಕು. ನಾವು ಧರ್ಮದ ಹಾದಿಯಲ್ಲಿ ನಡೆದರೆ ದೈವ ನಮ್ಮ ಬಾಡಿಗಾರ್ಡ್ ಆಗಿ ನಿಲ್ಲುತ್ತದೆ. ಜಾತ್ರೆ-ನೇಮಗಳು ದುಂದುವೆಚ್ಚವಲ್ಲ. ಅವು ನಮ್ಮ ಊರಿನ "Family Get-together" ಇದ್ದಂತೆ. ವರ್ಷಕ್ಕೊಮ್ಮೆ ಎಲ್ಲರೂ ಸೇರಿ ದೈವದ ಮುಂದೆ ಲೆಕ್ಕಾಚಾರ ಒಪ್ಪಿಸಿ, ಅನ್ನದಾನ ಮಾಡಿ, ಸಾಮಾಜಿಕ ಒಗ್ಗಟ್ಟನ್ನು ಕಾಪಾಡಿಕೊಳ್ಳುವ ವ್ಯವಸ್ಥೆ ಅದು.
*ನಾಲ್ಕನೆಯದಾಗಿ, "ಎಷ್ಟು ದೈವ-ದೇವರನ್ನು ನಂಬಬೇಕು?" ಎಂಬ ಪ್ರಶ್ನೆಗೆ ಉತ್ತರ ಒಂದು ಮರದಂತೆ.* ಒಂದು ಮರಕ್ಕೆ ಬೇರು, ಕಾಂಡ, ರೆಂಬೆ-ಕೊಂಬೆ ಇದ್ದಂತೆ ನಮ್ಮ ಆರಾಧನೆಯಲ್ಲೂ ಒಂದು ವ್ಯವಸ್ಥೆ ಇದೆ. ಬೇರು ಎಂದರೆ ನಮ್ಮ ಕುಲ ದೈವ - ಜುಮಾದಿ, ಅರಸು, ರಕ್ತೇಶ್ವರಿ. ಇದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಬೇರು ಕತ್ತರಿಸಿದರೆ ಮರ ಜೀವಂತ ಇರಲು ಸಾಧ್ಯವೇ? ಇದು ಕಡ್ಡಾಯ. ಕಾಂಡ ಎಂದರೆ ನಮ್ಮ ಇಷ್ಟ ದೇವರು - ಶಿವ, ವಿಷ್ಣು ಅಥವಾ ದೇವಿ. ನಮ್ಮ ಮನಸ್ಸಿಗೆ ಅತ್ಯಂತ ಹತ್ತಿರವಾದ ಒಬ್ಬರು ಅಥವಾ ಇಬ್ಬರು ದೇವರನ್ನು ಭಕ್ತಿಯಿಂದ ಆರಾಧಿಸಿದರೆ ಸಾಕು. ರೆಂಬೆ-ಕೊಂಬೆ ಎಂದರೆ ನಮ್ಮ ಊರಿನ ಗ್ರಾಮ ದೈವಗಳು ಮತ್ತು ಪರ ದೈವಗಳು - ಗುಳಿಗ, ಬಬ್ಬುಸ್ವಾಮಿ, ಕೊರಗಜ್ಜ. ಇವರಿಗೆ ಗೌರವ ಕೊಡಬೇಕು, ವರ್ಷಕ್ಕೊಮ್ಮೆ ನಮಸ್ಕಾರ ಮಾಡಬೇಕು. ಆದರೆ ಎಲ್ಲಾ ಗುಡಿಗೂ ಹೋಗಿ ಗೊಂದಲ ಮಾಡಿಕೊಳ್ಳಬಾರದು.
*ಕೊನೆಯದಾಗಿ, ಗುತ್ತಿನ ಮನೆ ಮತ್ತು ಕಟ್ಟು-ಕಟ್ಟಳೆ ಎಂದರೇನು ಎಂದು ತಿಳಿಯೋಣ.*
ಗುತ್ತಿನ ಮನೆ ಎಂದರೆ ನಮ್ಮ DNA ಇದ್ದಂತೆ. ಹಿಂದೆ ತುಳುನಾಡಿನಲ್ಲಿ ಸಾವಿರಾರು ಗುತ್ತುಗಳಿದ್ದವು. ಪ್ರತಿ ಗುತ್ತು ಒಂದು ಸಣ್ಣ ರಾಜ್ಯವೇ ಆಗಿತ್ತು. ಆ ಗುತ್ತಿಗೆ ಒಬ್ಬ ಯಜಮಾನ, ಒಂದು ದೈವ ಮತ್ತು ಒಂದು ಕಟ್ಟು-ಕಟ್ಟಳೆ ಇರುತ್ತಿತ್ತು. ಗುತ್ತಿನ ಮನೆ ಎಂದರೆ ಆ ರಾಜ್ಯದ Headquarters. ನಮ್ಮ ಅಜ್ಜ-ಮುತ್ತಜ್ಜಂದಿರು ಕಟ್ಟಿದ ಆ ಮನೆಯಲ್ಲೇ ದೈವದ ಮೂಲ ಶಕ್ತಿ ನೆಲೆಸಿರುತ್ತದೆ. ಕಟ್ಟು-ಕಟ್ಟಳೆ ಎಂದರೆ ಆ ಗುತ್ತಿನ ಸಂವಿಧಾನ. "ಮಂಗಳವಾರ ಮಾಂಸ ತಿನ್ನಬಾರದು", "ಹೊಸ ಬೆಳೆಯನ್ನು ಮೊದಲು ದೈವಕ್ಕೆ ಅರ್ಪಿಸಬೇಕು", "ಅಕ್ಕ-ತಂಗಿಯರಲ್ಲಿ ಜಗಳವಾಡಬಾರದು" - ಇವು ಕಟ್ಟು-ಕಟ್ಟಳೆಗಳು. ಇವನ್ನು ಮೀರಿದರೆ ದೈವ "Fine" ಹಾಕುತ್ತದೆ, ಅಂದರೆ ನಮ್ಮ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ. ನಾವು ಬೆಂಗಳೂರಿನಲ್ಲಿರಲಿ, ಅಮೆರಿಕಾದಲ್ಲಿರಲಿ, ನಾವು "---- ಗುತ್ತಿನ ಮಗ" ಎಂಬ Identity ಎಂದಿಗೂ ಬದಲಾಗುವುದಿಲ್ಲ. ಇದನ್ನು ಮರೆತರೆ ನಾವು ಬೇರು ಇಲ್ಲದ ಮರದಂತೆ.
ಒಟ್ಟಿನಲ್ಲಿ, ದೈವ-ದೇವರು ನಮ್ಮ ಶತ್ರುಗಳಲ್ಲ, ಅವರು ನಮ್ಮ ಜೀವನದ Google Map ಇದ್ದಂತೆ. ದಾರಿ ತಪ್ಪಿದಾಗ ಸರಿಯಾದ ಮಾರ್ಗ ತೋರಿಸುವವರು. ಭಯದಿಂದ ಪೂಜೆ ಮಾಡಬೇಡಿ, ತಂದೆ-ತಾಯಿಯನ್ನು ಪ್ರೀತಿಸುವಂತೆ ಪ್ರೀತಿಯಿಂದ ನೆನಪಿಸಿಕೊಳ್ಳಿ. ದುಡ್ಡಿಲ್ಲ ಎಂದರೆ ಚಿಂತೆಯಿಲ್ಲ. ದಿನಕ್ಕೆ ಒಂದು ನಿಮಿಷ ಕಣ್ಣು ಮುಚ್ಚಿ "ಅಪ್ಪಾ, ಕಾಪಾಡಪ್ಪ" ಅಂದರೆ ಸಾಕು. ಅದೇ ಕೋಟಿ ರೂಪಾಯಿಯ ಪೂಜೆಗೆ ಸಮ. ದುಡ್ಡು ಸಂಪಾದಿಸಲು ಎಲ್ಲಿಗಾದರೂ ಹೋಗಿ, ಆದರೆ ನಿಮ್ಮ ಬೇರನ್ನು ಊರಿನಲ್ಲೇ ಭದ್ರವಾಗಿಡಿ. ವರ್ಷಕ್ಕೊಮ್ಮೆಯಾದರೂ ಜಾತ್ರೆ-ನೇಮಕ್ಕೆ ಹೋಗಿ ನಿಮ್ಮ ಬೇರಿಗೆ ನೀರು ಹಾಕಿ. ಇದನ್ನು ಮಾಡಿದರೆ, ಧರ್ಮದ ಹಾದಿಯನ್ನು ಬಿಡದಿದ್ದರೆ, ನಮ್ಮ ದೈವ-ದೇವರುಗಳು ನಮ್ಮನ್ನು ಕೈ ಬಿಡುವುದಿಲ್ಲ.
No comments:
Post a Comment